ಪ್ರಪಂಚ - 
	ಹುಬ್ಬಳ್ಳಿಯಿಂದ ಪ್ರಕಟವಾಗುವ ಕನ್ನಡ ವಾರಪತ್ರಿಕೆ. 1954ರಲ್ಲಿ ಇದರ ಪ್ರಕಟಣೆ ಆರಂಭವಾಯಿತು. ಪಾಟೀಲ ಪುಟ್ಟಪ್ಪನವರು ಇದರ ಸಂಸ್ಥಾಪಕ ಸಂಪಾದಕರು.

	ಪ್ರಸ್ತುತ ಕಾಲದ ರಾಜಕೀಯ ಹಾಗೂ ಸಾಮಾಜಿಕ ಘಟನೆಗಳಿಗೆ ಹಿನ್ನೆಲೆಯನ್ನೊದಗಿಸುವುದು ಈ ಪತ್ರಿಕೆಯ ವೈಶಿಷ್ಟ್ಯ. ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗುವ ಘಟನೆಗಳಿಗೆ ಇದು ವ್ಯಾಖ್ಯಾನ ನೀಡುತ್ತದೆ. ಪ್ರಪಂಚ ಪ್ರದಕ್ಷಿಣೆ, ಕರ್ನಾಟಕ ದರ್ಶನ, ಭಾರತ ದರ್ಶನ ಎಂಬ ಮೂರು ಸ್ಥಿರ ಶೀರ್ಷಿಕೆಗಳ ಅಡಿಯಲ್ಲಿ ಪತ್ರಿಕೆ ಅನುಕ್ರಮವಾಗಿ ಪ್ರಪಂಚದ ಪ್ರಮುಖ ವ್ಯಕ್ತಿಗಳ, ಕರ್ನಾಟಕದ ಮಹತ್ತ್ವದ ವ್ಯಕ್ತಿಗಳ ಹಾಗೂ ಭಾರತದ ಮುಖ್ಯ ವ್ಯಕ್ತಿಗಳ ಪ್ರಚಲಿತ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅವರ ಪರಿಚಯ ಮಾಡಿಸುತ್ತವೆ. ಹಾಸ್ಯ, ವ್ಯಂಗ್ಯ ಚತುರೋಕ್ತಿಗಳಿಂದ ಕೂಡಿದ ಈ ಪರಿಚಯಾತ್ಮಕ ವಿಶ್ಲೇಷಣೆಗಳು ತುಂಬ ಆಕರ್ಷಕವಾಗಿರುತ್ತವೆ.

	ಅನುಭವದಲ್ಲಿ ಅಮೃತತ್ವವಿದೆ. ಶೀರ್ಷಿಕೆಯಲ್ಲಿ ಪಕ್ವವಾದ ಹಾಗೂ ವಿಚಾರಪೂರ್ಣವಾದ ಉವಾಚಗಳಿರುತ್ತವೆ. ನೀವೂ ತಿಳಿಯಿರಿ ಶೀರ್ಷಿಕೆಯಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಜ್ಞಾನವರ್ಧಕ ಸಂಗತಿಗಳನ್ನು ಪ್ರಕಟಿಸಲಾಗುತ್ತಿದೆ. ಇವಲ್ಲದೆ ಚಲನಚಿತ್ರರಂಗಕ್ಕೆ ಸಂಬಂಧಿಸಿದ ಸುದ್ದಿಗಳೂ ವಾಖ್ಯಾನಗಳೂ ಇಲ್ಲಿವೆ. ಅಲ್ಲದೆ ಕಥೆಗಳನ್ನು ಹಾಗೂ ಧಾರಾವಾಹಿ ಕಾದಂಬರಿಯನ್ನು ಈ ಪತ್ರಿಕೆ ಪ್ರಕಟಿಸುವುದಿದೆ. ಪ್ರಮುಖ ಸುದ್ದಿಗಳ ಸಂಕಲನವೆಂದು ಈ ಪತ್ರಿಕೆ ತನ್ನನ್ನು ಕರೆದುಕೊಂಡರೂ ಕೇವಲ ಸುದ್ದಿ ಸಂಕಲನಕ್ಕೆ ಇದು ಸೀಮಿತವಾಗಿಲ್ಲ. ಸಾಮಾಜಿಕ ಕ್ಷೇತ್ರಗಳಲ್ಲಾಗಲಿ ರಾಜಕೀಯ ಕ್ಷೇತ್ರಗಳಲ್ಲಾಗಲಿ ನಡೆದ ಯಾವುದಾದರೊಂದು ಘಟನೆ ಅನ್ಯಾಯವಾದ್ದೆಂದು ತೋರಿದಾಗ ಈ ಪತ್ರಿಕೆ ಅದರ ವಿರುದ್ಧ ನಿರ್ಭೀತವಾಗಿ ಧ್ವನಿಯೆತ್ತಿದೆ. ಜನಮನವನ್ನು ಪ್ರತಿಬಿಂಬಿಸುವುದು ಪತ್ರಿಕೆಯ ಸಂಪಾದಕೀಯ ಧೋರಣೆಯಾಗಿರುತ್ತದೆ. ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಸಂಬಂಧಿಸಿದ ಹೊಸ ಘಟನೆಗಳ ಬೆಳಕಿನಲ್ಲಿ ಅವುಗಳ ಪುನರ್ಮೌಲ್ಯಮಾಪನ ಮಾಡಲೂ ಇದು ಯತ್ನಿಸುತ್ತದೆ.
(ಎಸ್.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ